Tuesday, July 29, 2008

ಪುನರ್ಮಿಲನ ----- ಭಾಗ 2

ಹೊರಗಡೆ ಬಿಸಿಲು ಮಳೆ ಕಣ್ಣಾ ಮುಚ್ಚಾಲೆ ಆಡುತ್ತಿದೆ. ಈಗ ಕೆಲಸ ಮಾಡುವ mood ಇಲ್ಲ. ನನ್ನ ಕಥೇನಾ ಮುಂದುವರೆಸುತ್ತೇನೆ..

ರಾಧೆಯ ಜೀವನದಿಂದ ಅವಳ ಶ್ಯಾಮಾ ಹೋದಮೇಲೆ ಅವಳ ಬದುಕೇ ಬರದಾದಂತಾಯಿತು. ಅಸಹನೀಯ, ಅವರ್ಣನೀಯ ನೋವು ದುಃಖ. ಅವಳ ಈ ಪ್ರೇಮದ ಕಥೆ ಅವಳ ಸ್ನೇಹಿತರಿಗಾಗಲಿ ಅಥವಾ ಮನೆಯವರಿಗಾಗಲಿ ಗೊತ್ತಿರಲಿಲ್ಲ. ಹೀಗಾಗಿ ಯಾರೊಂದಿಗೂ ಹೇಳಿಕೊಳ್ಳಲು ಆಗದ ಸ್ಥಿತಿ. ಇವಿಷ್ಟು ಸಾಲದಕ್ಕೆ ಸೋತ ಅನುಭವ, ಅದರಿಂದ ಹತಾಶೆ ಹಾಗು ಸೇಡಿನ ಭಾವ.

ತುಂಬ ಪ್ರೀತಿಸಿದ್ದಳು, ಕುರುಡಾಗಿ ನಂಬಿದ್ದಳು ಅವನನ್ನು . ಈಗ ಅವನನ್ನು ಹೀಗಳೆಯಲು ಸಹ ಅವಳಿಗೆ ಆಗುತ್ತಿಲ್ಲ. ತನ್ನ ದುರಾದೃಷ್ಟವನ್ನು ತಾನೆ ಶಪಿಸುತ್ತ "life must go on" ಅಂತ ಪರಿಸ್ಥಿತಿಗೆ ಹೊಂದಿಕೊಳ್ಳಲು ಪ್ರಯತ್ನಿಸಿದಳು.

ಈ ಮನಸ್ಸು ತುಂಬಾ ಪಾಪಿ ಕಣ್ರೀ... ಯಾವುದು ಬೇಡವೋ ಯಾವುದನ್ನು ಮರೆಯಬೇಕೂ ಅದನ್ನೇ ಪುನಃ ಜ್ಞಾಪಿಸುತ್ತದೆ...ರಾಧಾ ಕೂಡ ಹೊರತಾಗಿರಲಿಲ್ಲ. ಅವಳು ಅವನಿಂದ ಅವನ ನೆನಪಿನಿಂದ ಎಷ್ಟು ದೂರ ಹೋಗಲು ಪ್ರಯತ್ನಿಸಿದರೂ ಅವಳ ಮನಸ್ಸು, ಹೃದಯ ಅವನಲ್ಲಿಗೆ ಎಳಿಯುತಿತ್ತು.

ಅವಳ ದಿನಚರಿ monotonous! ಏಕತಾನತೆ. ಅವಳ ಉದ್ಯೋಗ ಅವಳಿಗೆ ಸ್ವಲ್ಪ ನೆಮ್ಮದಿ ಕೊಟ್ಟಿತು. ಆದರೂ ಮತ್ತದೇ ಬೇಸರ, ಜಿಗುಪ್ಸೆ. ಆತ್ಮಹತ್ಯೆಯ ವಿಚಾರ ಕೂಡ ಹಾಗೆ ಮನಸಲ್ಲಿ ಸುಳಿದಿತ್ತು. ಆದರೆ ಅವಳನ್ನೇ ತನ್ನ ಸರ್ವಸ್ವ ಎಂದು ಬದುಕುತ್ತಿರುವ ಅಪ್ಪ ಅಮ್ಮ, ಅವಳನ್ನು ತಾಯಿಗಿಂತ ಹೆಚ್ಚಿನ ಅಕ್ಕರೆಯಿಂದ ನೋಡುವ ಅಕ್ಕ ಹೀಗೆ ಇವರೆಲ್ಲರ ಮೋಹ ಪಾಶ ಅವಳನ್ನು ಆತ್ಮಹತ್ಯೆ ಯೋಚನೆ ಇಂದ ವಿಮುಖಳಾಗಿಸಿತು. ಒಂದು ಮೋಹ ಸಾವಿನ ಆಲೋಚನೆ ತಂದರೆ ಇನ್ನೊಂದು ಮೋಹ ಬದುಕುವ ಕಾರಣ ತೋರಿತು.

ಅವನ ನೆನಪು ಬಂದ ಕೂಡಲೇ ನೋವಿನ ಹನಿಗಳು ಇವಳನ್ನು ನೋಡಿ ಹಾಸ್ಯ ಮಾಡಲೋ ಎಂಬಂತೆ ಹೊರಬರುತ್ತಿತ್ತು. ಎಲ್ಲೆಂದರಲ್ಲಿ ಅಳುವ ಸ್ವಾತಂತ್ರವಿಲ್ಲ. ಪರಿಚಯದವರ ಪ್ರಶ್ನೆ ಎದುರಿಸುವ ಸಾಮರ್ಥ್ಯ ಸಹನೆ ಇಲ್ಲವೇ ಇಲ್ಲ. ಆದರೆ ದುಃಖ ಹೊರಬರಬೇಕಲ್ಲವೇ. ಅದಕ್ಕೆ ಅವಳ ನೆರವಿಗೆ ಬಂದದ್ದು ಇರುಳು. ರಾತ್ರಿ ಎಲ್ಲ ಕಡೆ ಕತ್ತಲು ತುಂಬಿದ ಮೇಲೆ ಎಲ್ಲರೂ ನಿದ್ರಾ ದೇವಿಗೆ ಶರಣಾರ್ತಿಗಳಾದ ಮೇಲೆ, ಇವಳು ತನ್ನ ದುಃಖವನ್ನು ಹೊರಗೆಡವುತಿದ್ದಳು. ಅವಳಿಗೆ ಅವಳ ತಲೆಯ ದಿಂಬು ಆಸರೆ. ಅವಳ ಕಣ್ಣೀರನ್ನು ತನ್ನೊಳಗೆ ಸೇರಿಸಿ ಅವಳ ದುಃಖವನ್ನು ಕಡಿಮೆ ಮಾಡುತಿತ್ತು.

ಶ್ಯಾಮಾ ರಾಧೆಯನ್ನು ಮರೆತಿದ್ದನೋ ಇಲ್ಲವೊ ಆದರೆ ರಾಧೆ ಶ್ಯಾಮನನ್ನು, ಅವಳ ಶ್ಯಾಮನನ್ನು ಮರೆತು ಕೂಡ ಮರೆಯಳಾರಲು

ಮುಂದುವರೆಯುತ್ತದೆ .......

No comments: